Honorable Chief Minister | Government of Karnataka
Shri G T DeveGowda
Honorable MLA and President
1905 ರಲ್ಲಿ ಮೈಸೂರು ಪ್ರಾಂತೀಯ ಸರ್ಕಾರ ಮೈಸೂರು ಸಹಕಾರ ಸಂಘಗಳ ನಿಬಂಧನೆ 3ನ್ನು ರಚನೆ ಮಾಡಿ 1904ರ ಕಾಯ್ದೆಯಲ್ಲಿರುವ ಕೆಲವು ಅಂಶಗಳನ್ನು ಸರಳಗೊಳಿಸಿ ಜನರ ಅಗತ್ಯಗಳಿಗನುಗುಣವಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು.
ವಿಶೇಷತೆ: ಕೇಂದ್ರ ಕಾಯ್ದೆಯಲ್ಲಿದ್ದ ಸಾಲ ನೀಡುವಿಕೆ, ಸದಸ್ಯರ ಹೊಣೆಗಾರಿಕೆ ಮತ್ತು ಲಾಭದ ಹಂಚಿಕೆ ವಿಧಾನದಲ್ಲಿ ಬದಲಾವಣೆ ಮಾಡದೇ ಪತ್ತಿನ ಸಹಕಾರ ಸಂಘಗಳ ಜೊತೆ ಬೇರೆ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಎಲ್ಲಾ ರೀತಿಯ ಸಹಕಾರ ಸಂಘಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿತು.
ಮದ್ರಾಸ್ ಪ್ರಾಂತ್ಯವು 1892 ರಲ್ಲಿ ಸರ್ ಫೆಡ್ರಿಕ್ ನಿಕೋಲನ್ ಎಂಬ ಐ.ಸಿ.ಎಸ್ ಅಧಿಕಾರಿಯನ್ನು ಯುರೋಪ್ ರಾಷ್ಟ್ರಗಳಲ್ಲಿರುವ ಸಹಕಾರ ಚಳವಳಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಕಳುಹಿಸಿತು.
ನಿಕೋಲನ್ 1895 ಮತ್ತು 1897 ರಲ್ಲಿ ಎರಡು ಸಂಪುಟಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿ ರೈತರ ಏಳ್ಗೆ ಹಾಗೂ ಅವರ ಸಮಸ್ಯೆ ಪರಿಹಾರಕ್ಕೆ ರೈಫಿಸಾನ್ ಮಾದರಿಯ ಸಹಕಾರ ಸಂಘಗಳನ್ನು ಸ್ಥಾಪಿಸಲು ಸಲಹೆ ನೀಡಿದನು.
ಉತ್ತರ ಪ್ರದೇಶದ ಪ್ರಾಂತೀಯ ಸರ್ಕಾರವು ಡೂಪರ್ನೆಕ್ಸ್ ಎಂಬ ಐ.ಸಿ.ಎಸ್ ಅಧಿಕಾರಿಯನ್ನು ರೈತರ ಸಮಸ್ಯೆಗಳನ್ನು ಪರಿಹರಿಸಲು ಸಲಹೆ ನೀಡಲು ನೇಮಕ ಮಾಡಿತು.
ಇವರು "ಉತ್ತರ ಭಾರತದ ಜನತಾ ಬ್ಯಾಂಕ್" ಎಂಬ ಪುಸ್ತಕವನ್ನು ಹೊರತಂದು ರೈತರ ಸಮಸ್ಯೆ ಪರಿಹಾರಕ್ಕೆ ಸಲಹೆಗಳನ್ನು ನೀಡಿದರು.
1900 ರಲ್ಲಿ ಈ ಎರಡು ವರದಿಗಳು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿತು. ನಂತರ ಕೇಂದ್ರ ಸರ್ಕಾರ ಸಹಕಾರ ಸಂಘಗಳನ್ನು ಸ್ಥಾಪಿಸಲು ನಿಯಮಾವಳಿಗಳನ್ನು ರಚಿಸಲು ಕಾನೂನು ಮಂತ್ರಿಯಾದ ಎಡ್ಡರ್ಡ್ ಲಾ ನೇತೃತ್ವದಲ್ಲಿ ಸಮಿತಿ ರಚಿಸಿತು.
ಅಂದಿನ ಕೇಂದ್ರ ಕಾನೂನು ಮಂತ್ರಿಗಳಾಗಿದ್ದ ಎಡ್ವರ್ಡ್ ಲಾ ಅಧ್ಯಕ್ಷತೆಯಲ್ಲಿ ರಚಿಸಿದ ನಿಯಮಾವಳಿಗಳು ಹೆನ್ರಿ. ಡಬ್ಯ್ಯೂ ವೂಲ್ಫ್ ರವರಿಂದ ಪರಿಶೀಲಿಸಲ್ಪಟ್ಟು ಸರ್. ಡೆಂಜಿಲ್ ಇಬೇಟ್ಸನ್ ರವರಿಂದ ಕೇಂದ್ರ ವಿಧಾನ ಪರಿಷತ್ನಲ್ಲಿ ಮಂಡಿಸಲ್ಪಟ್ಟಿತು.
1904 ರ ಮಾರ್ಚ್ 25ರಂದು ಸಹಕಾರಿ ಕಾಯ್ದೆ ಜಾರಿಗೆ ಬಂದಿತು. ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಅವರಿಂದ ಒಪ್ಪಿಗೆ ಹಾಗೂ ಸಹಿ ಪಡೆಯಲಾಯಿತು.
ವಿಶೇಷತೆ: ಯುರೋಪ್ ದೇಶಗಳಲ್ಲಿ ಆಧುನಿಕ ಸಹಕಾರ ಚಳುವಳಿಯು ಪ್ರಾರಂಭವಾಗಿ ಸುಮಾರು 50 ವರ್ಷಗಳ ನಂತರ ಭಾರತದಲ್ಲಿ ಸಹಕಾರಿ ಆಂದೋಲನ ಪ್ರಾರಂಭವಾಯಿತು.
1918 ರಲ್ಲಿ ಮೈಸೂರು ಪ್ರಾಂತೀಯ ಸಹಕಾರ ಸಂಘಗಳ ನಿಬಂಧನೆ 7 ಅನ್ನು ಜಾರಿಗೆ ತಂದಿತು.
1920 ರಲ್ಲಿ ಸಹಕಾರ ಚಳವಳಿಯ ಪ್ರಗತಿ ಪರಿಶೀಲಿಸಲು ಲ್ಲೂಬಾಯಿ ಶ್ಯಾಮಲದಾಸ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿಯ ಶಿಫಾರಸ್ಸಿನ ಮೇರೆಗೆ ಮೈಸೂರು ಸಹಕಾರ ಪ್ರಾವಿನ್ಸಿಯಲ್ ಬ್ಯಾಂಕ್ ರಾಜ್ಯ ಅಪೆಕ್ಸ್ ಬ್ಯಾಂಕ್ ಎಂದು ಪರಿಗಣಿಸಲಾಯಿತು.
1929 ರಲ್ಲಿ ನಿಬಂಧನೆಗೆ ತಿದ್ದುಪಡಿ ಮಾಡಿ ಭೂ ಅಡಮಾನ ಬ್ಯಾಂಕಿನ ರಚನೆಗೆ ಅವಕಾಶ ಮಾಡಿಕೊಟ್ಟಿತು.
ಮೈಸೂರು ಸರ್ಕಾರ ಸಹಕಾರ ಕಾಯ್ದೆಯ ಪರಿಶೀಲನೆ ಬಗ್ಗೆ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದ ರಾಜ ಧರ್ಮ ಪ್ರವೀಣ ಚಂದ್ರಶೇಖರ್ ಅಯ್ಯರ್ ರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿತು.
ಈ ಸಮಿತಿ ತನ್ನ ವರದಿ ಸಲ್ಲಿಸಿ ಸಹಕಾರ ಕಾಯ್ದೆಯನ್ನು ಸರಳಗೊಳಿಸುವ ಬಗ್ಗೆ ಶಿಫಾರಸ್ಸು ಮಾಡಿತು.
1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಪ್ರಥಮ ಬಾರಿಗೆ ಮೈಸೂರು ಪ್ರಾಂತ್ಯದಲ್ಲಿ ಸಹಕಾರ ಕಾಯ್ದೆಯನ್ನು ರಚಿಸಲಾಯಿತು.
1948 ರಲ್ಲಿ ಈ ಕಾಯ್ದೆ ಜಾರಿಗೆ ಬಂದಿತು. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು 1952 ರಲ್ಲಿ ನಿಯಮಗಳನ್ನು ರಚನೆ ಮಾಡಲಾಯಿತು.
1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ 9 ಜಿಲ್ಲೆಗಳಿದ್ದ ಹಳೇ ಮೈಸೂರು 19 ಜಿಲ್ಲೆಗಳಾಗಿ ವಿಶಾಲ ಮೈಸೂರು ರಾಜ್ಯವಾಯಿತು.
ವಿಶಾಲ ಮೈಸೂರಿಗೆ ಮದ್ರಾಸ್, ಹೈದ್ರಾಬಾದ್, ಮುಂಬೈ, ಕೊಡಗು ಪ್ರಾಂತ್ಯಗಳಿದ್ದ ಹಲವು ಜಿಲ್ಲೆಗಳು ಸೇರಿಕೊಂಡವು. ಏಕರೂಪದ ಆಡಳಿತ ಸಾಧ್ಯವಿರಲಿಲ್ಲ. ಆದ್ದರಿಂದ 1959 ರಲ್ಲಿ ಮೈಸೂರು ಸಹಕಾರ ಸಂಘಗಳ ಕಾಯ್ದೆ 1959 ಅನ್ನು ಜಾರಿಗೆ ತರಲಾಯಿತು.
1960 ರಲ್ಲಿ ನಿಯಮಗಳನ್ನು ರಚಿಸಲಾಯಿತು. 1973 ರಲ್ಲಿ ಮೈಸೂರು ರಾಜ್ಯ "ಕರ್ನಾಟಕ" ಎಂದು ನಾಮಕರಣ ಮಾಡಿದಾಗ ಕಾಯ್ದೆಯ ಹೆಸರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಎಂದು ಬದಲಾಯಿತು.
ಪ್ರಸ್ತುತ ರಾಜ್ಯದಲ್ಲಿ ಈ ಕಾಯ್ದೆಯಂತೆಯೇ ಸಹಕಾರ ಚಳವಳಿ ಮುಂದುವರಿಯುತ್ತಿದೆ.